ಶುಕ್ರವಾರ, ಆಗಸ್ಟ್ 5, 2011

ಎಂಟನೇ ಪ್ರಕಟಣೆ - ಹೆಲ್ತಿ ಲೈಫ್ ಸ್ಟೈಲ್ ಎಂದರೇನು?

ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಯಾಗಿ ಹೆಸರು ಗಳಿಸಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಲೇಖನಗಳ ಸಂಕಲನ 'ಹೆಲ್ತಿ ಲೈಫ್ ಸ್ಟೈಲ್ ಎಂದರೇನು?'. ಈಗಾಗಲೇ ಮಾಸಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಇಲ್ಲಿ ಒಟ್ಟು ಮಾಡಿ ಕೊಡಲಾಗಿದೆ. ಈವರೆಗೆ ಆಯುರ್ವೇದ ವೈದ್ಯ ಪದ್ಧತಿಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡಲು ಲೇಖನಗಳನ್ನು ಬರೆಯುತ್ತಿದ್ದ ಇವರು, ಇಲ್ಲಿ ಬೇರೆ ವಿಷಯಗಳೆಡೆಗೆ ಹೊರಳಿಕೊಂಡಿದ್ದಾರೆ. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಸಂಕಲನದ ಲೇಖನಗಳಲ್ಲಿ ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವಂತಹ ವಿಷಯಗಳೂ ಸೇರಿಕೊಂಡಿದೆ.
ಡಾ.ಕೆ.ಪೂರ್ಣಿಮಾ ಕೋಡೂರು
ಅಮಿತಾಬ್ ಬಚ್ಚನ್ ಮಾಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನಿರೂಪಣೆಯ ಜಾಗಕ್ಕೆ, ಶಾರುಖ್ ಬಂದಾಗ ಯಾಕೆ ಆತನಿಗೆ ಆ ಸ್ಥಾನವನ್ನು ಭರ್ತಿ ಮಾಡಲಾಗಲಿಲ್ಲ ಎನ್ನುವಂತಹ ವಿಷಯದಿಂದಾರಂಭಿಸಿ, ಜಾಸ್ತಿ ಓದಿದರೆ ಕನ್ನಡಕ ಬರುತ್ತದಾ? ತಂದೆ ತಾಯಿಯನ್ನೇ ಹೊಡೆಯುವ ಮಗನಿಗಿರುವ ಮಾನಸಿಕ ಕಾಯಿಲೆ ಯಾವುದು? ಸ್ಲೀಪ್ ಎಪ್ನಿಯಾ ಎಂದರೇನು? ಫೇಲಾದರೆ ಬದುಕು ಮುಗಿದೇ ಹೋಗುತ್ತದಾ? ತಾಯಂದಿರೇಕೆ ತಮ್ಮ ಮಕ್ಕಳನ್ನು ಕೊಲ್ಲುವ ಮಟ್ಟಕ್ಕೆ ಇಳಿಯುತ್ತಾರೆ? ಅಪ್ಪ -ಅಮ್ಮನ ಶವದೆದುರು ಮೂವತ್ತಾರು ಗಂಟೆಯಿದ್ದ ಮಗುವಿನ ಮನಸ್ಸು ಏನನ್ನು ಹೇಳುತ್ತದೆ?ಎನ್ನುವಂತಹ ವಿಷಯದವರೆಗೆ ಮನಸ್ಸು ಮತ್ತು ದೇಹಕ್ಕೆ ಸಂಬಂಧಿಸಿದ ಆತ್ಮೀಯವಾಗಿ ಓದಿಸಿಕೊಳ್ಳುವ ಲೇಖನಗಳು ಈ ಸಂಕಲನದಲ್ಲಿದೆ. ಈಗಾಗಲೇ ಏಳು ಪುಸ್ತಕಗಳನ್ನು ಬರೆದಿರುವ ಇವರ ಎಂಟನೇ ಕೃತಿ ಇದಾಗಿದೆ.
ಒಟ್ಟು 31 ಲೇಖನಗಳನ್ನೊಳಗೊಂಡಿರುವ ಈ ಪುಸ್ತಕ 112 ಪುಟಗಳಲ್ಲಿ ಪ್ರಕಟಗೊಂಡಿದ್ದು, ಬೆಲೆ 60 ರೂಪಾಯಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ