ಶುಕ್ರವಾರ, ಆಗಸ್ಟ್ 5, 2011

ಏಳನೇ ಪ್ರಕಟಣೆ - ಮಂಜು ಕರಗುವ ಮುನ್ನ

ವೃತ್ತಿಯ ನಡುವೆ ತಮ್ಮ ಪ್ರವೃತ್ತಿಯನ್ನು ಕಳೆದುಕೊಳ್ಳದ ದೊಡ್ಡಮನಿ ಎಂ. ಮಂಜುನಾಥರವರು ಬರೆದ ಒಟ್ಟು 57 ಕವನಗಳ ಸಂಕಲನವೇ 'ಮಂಜು ಕರಗುವ ಮುನ್ನ' ಇದು ಮಂಜುನಾಥರವರ ಚೊಚ್ಚಲ ಕವನ ಸಂಕಲನವಾಗಿದ್ದು, ಈ ಸಂಕಲನದ 'ಇದು ಹೃದಯಗಳ ಮಿಲನ' ಎನ್ನುವ ಉಪಶೀರ್ಷಿಕೆಯೇ ಇಲ್ಲಿನ ಕವನಗಳ ಬಗ್ಗೆ ಹೇಳುತ್ತದಾದರೂ, ಕವನಗಳೆಲ್ಲವೂ ಹರೆಯದ ಪ್ರೀತಿಯನ್ನು ಮಾತ್ರ ಒಳಗೊಂಡಿಲ್ಲ. ತಾಯಿಯ ವಾತ್ಸಲ್ಯ, ದೇಶಪ್ರೇಮ, ಪ್ರಕೃತಿ ಪರಿಸರ, ಕನ್ನಡಪ್ರೇಮ, ರಕ್ಷಾಬಂಧನ...ಹೀಗೆ ಬದುಕಿನ ಅನೇಕ ಭಾವಗಳನ್ನುಳ್ಳ ಕವನಗಳನ್ನು ಈ ಸಂಕಲನ ಒಳಗೊಂಡಿದೆ.
ದೊಡ್ಡಮನಿ ಎಂ. ಮಂಜುನಾಥ

ಸಂಕಲನಕ್ಕೆ ಬೆನ್ನುಡಿ ಬರೆದಿರುವ ಖ್ಯಾತ ಕನ್ನಡ ಚಲಚಚಿತ್ರ ಗೀತರಚನಾಕಾರ ಹೃದಯಶಿವ ಅವರು, 'ಯುವ ಮನಸ್ಸುಗಳ ಒಳಲೋಕವನ್ನು ಯಥಾವತ್ತಾಗಿ ತಮ್ಮ ಕಾವ್ಯದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುವ ಇವರ ಗುಣ ಮೆಚ್ಚುವಂಥದ್ದು.ಹೃದಯದಿಂದ ಬಂದದ್ದು ಹೃದಯಕ್ಕೆ ಹತ್ತಿರವಾಗುತ್ತದೆ ಎನ್ನುವ ಮಾತಿನಂತೆ ಇವರ ಕವನಗಳು   ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ. ವಿರಹ,ತುಂಟತನ,ಒಂಟಿತನದ ಆರ್ದ್ರತೆ,ಭರವಸೆ,ನಿರೀಕ್ಷೆ,ಕಲ್ಪನಾ ಜಗತ್ತಿನ ವಿಹಾರ,ಹುಚ್ಚು ಭ್ರಮೆಗಳ ತುಯ್ದಾಟ-ಹೀಗೆ ಪ್ರೀತಿಯ ಬೇರೆ ಬೇರೆ ಮುಖಗಳನ್ನು ಎತ್ತಿ ತೋರಿಸುವ ಇವರ ಬರಹ ನೈಜತೆಯಿಂದ ಕೂಡಿದೆ' ಎಂದು ಹೇಳಿರುವ ಈ ಸಾಲುಗಳೇ ಮಂಜುನಾಥ ಅವರ ಕವನಗಳ ಒಳಗನ್ನು ಸ್ಪಷ್ಟವಾಗಿ ತೆರೆದಿಡುತ್ತದೆ. ಈ ಸಂಕಲನಕ್ಕೆ ಕುವೈತ್ ನಲ್ಲಿ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ಆಜಾದ್ ಮುನ್ನುಡಿ ಬರೆದಿದ್ದಾರೆ.
ಈ ಸಂಕಲನದ ಇನ್ನೂ ಒಂದು ವಿಶೇಷವೆಂದರೆ, ಪ್ರತಿಯೊಂದು ಕವನಗಳಿಗೂ ಒಂದೊಂದು ಚಿತ್ರಗಳನ್ನು ಬಳಸಲಾಗಿದೆ. ಕವನ ಅಥವಾ ಕಥೆಗಳಿಗೆ ರೇಖಾಚಿತ್ರಗಳನ್ನು ಬಳಸುವುದು ಸಹಜ. ಆದರೆ ಈ ಕವನಸಂಕಲನದಲ್ಲಿ ಬಹುಶಃ ಕನ್ನಡದಲ್ಲಿ ಇದೇ ಮೊದಲಬಾರಿಗೆ ಕವನದ ಅರ್ಥಕ್ಕೆ ಹೊಂದುವಂತಹ ಚಿತ್ರಗಳನ್ನು ಬಳಸಲಾಗಿದ್ದು, ಇದು ಸಂಕಲನದ ಅಂದವನ್ನು ಹೆಚ್ಚಿಸಿದೆ.
72 ಪುಟಗಳಲ್ಲಿ ಪ್ರಕಟಗೊಂಡಿರುವ ಮಂಜು ಕರಗುವ ಮುನ್ನ ಕವನ ಸಂಕಲನದ ಬೆಲೆ 50 ರೂಪಾಯಿ.

2 ಕಾಮೆಂಟ್‌ಗಳು: